ಚೌಹಾಣ ಸುಭದ್ರ ಕುಮಾರಿ
	1904-1948. ಭಾರತೀಯ ಕವಯಿತ್ರಿ. ಕತೆ ಹಾಗೂ ಪ್ರಬಂಧಗಳನ್ನೂ ಬರೆದಿದ್ದಾಳೆ. ಹಿಂದೀ ಸಾಹಿತ್ಯ ಕ್ಷೇತ್ರದಲ್ಲಿ ದ್ವಿವೇದೀ ಯುಗವೆಂದು ಹೆಸರಾಗಿರುವ ಅವಧಿಯಲ್ಲಿ ಬೆಳಕಿಗೆ ಬಂದ ಲೇಖಕಿಯರಲ್ಲಿ ಈಕೆ ಅತ್ಯಂತ ಜನಪ್ರಿಯಳಾದವಳು.

	ಈ ಅಲಹಾಬಾದ್ ನಗರದ ಒಂದು ಭಾಗವಾಗಿರುವ ನಿಹಾಲ್‍ಪುರ ಎಂಬ ಹಳ್ಳಿಯಲ್ಲಿ ಸಂಪ್ರದಾಯಸ್ಥ ರಾಜಪೂತ ಕುಟುಂಬವೊಂದರಲ್ಲಿ ಈಕೆ ಜನಿಸಿದಳು. ತಂದೆ ಠಾಕೂರ್ ರಾಮನಾಥಸಿಂಹ ಶಿಸ್ತಿನ ಸಿಪಾಯಿಯಾಗಿದ್ದು ಅದೇ ರೀತಿಯಲ್ಲಿ ತಮ್ಮ ಮಕ್ಕಳನ್ನು ಬೆಳೆಸಿದರು. ಈಕೆಯ ಪ್ರಾರಂಭಿಕ ಶಿಕ್ಷಣ ಅಲಹಾಬಾದಿನಲ್ಲಿ ನಡೆಯಿತು. 15ನೆಯ ವರ್ಷದ ಹೊತ್ತಿಗೆ ಖಾಂಡ್ವಾದ ಠಾಕೂರ್ ಲಕ್ಷ್ಮಣಸಿಂಹ ಚೌಹಾಣನೊಡನೆ ಈಕೆಯ ವಿವಾಹವಾಯಿತು. ಸೋದರರ ಒತ್ತಾಸೆಯಿಂದ ವಿವಾಹಾನಂತರವೂ ವಾರಣಾಸಿಯ ಅಧ್ಯಾತ್ಮ ವಿದ್ಯಾಶಾಲೆಯಲ್ಲಿ ಶಿಕ್ಷಣವನ್ನು ಮುಂದುವರಿಸಿದಳಾದರೂ ಆ ಹೊತ್ತಿಗೆ ಪ್ರಾರಂಭವಾದ ಗಾಂಧೀಜಿಯವರ ಅಸಹಕಾರ ಆಂದೋಳನದಲ್ಲಿ ಭಾಗಿಯಾಗಿದ್ದ ತನ್ನ ಪತಿಗೆ ಆಸರೆಯಾಗಿ ನಿಲ್ಲುವ ಉದ್ದೇಶದಿಂದ ಈಕೆ ಜಬ್ಬಲ್‍ಪುರಕ್ಕೆ ಹಿಂದಿರುಗಿದಳು. ರಾಷ್ಟ್ರಧ್ವಜವನ್ನು ಅಗೌರವಿಸದ ಅರಸರನ್ನು ಪ್ರತಿಭಟಿಸಿ ಪ್ರದರ್ಶನ ನಡೆಸಿದ ಈಕೆಗೆ ಪ್ರಥಮ ಮಹಿಳಾ ಸತ್ಯಾಗ್ರಹಿ ಎನಿಸಿಕೊಳ್ಳುವ ಗೌರವ ಲಭ್ಯವಾಯಿತು. ಅಂದಿನಿಂದಲೂ ನಾಡಿನ ಸ್ವಾತಂತ್ರ್ಯ ಸಂಗ್ರಾಮದ ಮಂಚೂಣಿಯಲ್ಲಿಯೇ ಪತಿಪತ್ನಿಯರ ಈ ಜೋಡಿ ಕಾರ್ಯನಿರತವಾಗಿತ್ತು. ಇದರ ಪರಿಣಾಮವಾಗಿ 1940 ಮತ್ತು 1942ರಲ್ಲಿ ಈಕೆ ಸೆರೆಮನೆಯ ಶಿಕ್ಷೆಯನ್ನು ಅನುಭವಿಸಬೇಕಾಯಿತು. 1942ರಲ್ಲಂತೂ ಕೈಗೂಸಿನೊಂದಿಗೆ ಕಾರಾಗೃಹದಲ್ಲಿರಬೇಕಾಗಿ ಬಂತು. ಜೈಲುವಾಸದ ಪರಿಣಾಮವಾಗಿ ಒಮ್ಮೆ ಪ್ರಾಣಾಪಾಯವಾಗುವಷ್ಟರ ಆರೋಗ್ಯ ಕೆಟ್ಟುಹೋಯಿತು. ಅತ್ಯಂತ ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿ ಬಂದಿದ್ದರೂ ಗಾಂಧೀಜೀಯವರ ರಚನಾತ್ಮಕ ಕಾರ್ಯಗಳತ್ತ, ಸಮಾಜಧೋರಣೆಯ ಧ್ಯೇಯೋದ್ದೇಶಗಳತ್ತ ಆಕರ್ಷಿತಳಾದ ಈಕೆ ಅಸ್ಪøಶ್ಯತಾನಿವಾರಣೆ, ಮಹಿಳೆಯರ ಉದ್ಧಾರ, ಹಿಂದೂ-ಮುಸ್ಲಿಂ ಐಕ್ಯ, ಜಾತ್ಯತೀತತೆ ಇವೆ ಮೊದಲಾದ ಆದರ್ಶಗಳಿಗಾಗಿ ತನ್ನ ಬಾಳನ್ನು ಮೀಸಲಾಗಿಟ್ಟಳು. ಈ ಆದರ್ಶಗಳು ಕೇವಲ ಉಪದೇಶವಾಗಿರಲಿಲ್ಲ ಎಂಬುದಕ್ಕೆ ಸಾಕ್ಷಿಯಂದರೆ ಹರಿಜನೋದ್ಧಾರ ಕಾರ್ಯಕ್ರಮದ ಅಂಗವಾಗಿ ಈಕೆ ಅವರ ಕೇರಿಗಳಲ್ಲಿಯೇ ಅವರೊಡನೆಯೇ ವಾಸವಾಗಿದ್ದುದು, ವರದಕ್ಷಿಣೆ ಕೊಡುವ ಅಥವಾ ತೆಗೆದುಕೊಳ್ಳುವ ಸಂಬಂಧಗಳಿದ್ದಂಥ ವಿವಾಹ ಸಮಾರಂಭಗಳನ್ನು ಬಹಿಷ್ಕರಿಸುತ್ತಿದ್ದುದು ಹಾಗೂ ತನ್ನ ಮಕ್ಕಳನ್ನೇ ಹೊರಜಾತಿಯವರಿಗೆ ಕೊಟ್ಟು ಅಂತರ ಜಾತೀಯ ವಿವಾಹಗಳನ್ನು ನಡೆಸಿದ್ದು.

	ಈಕೆ ಹುಟ್ಟಿನಿಂದಲೇ ಸಾಹಿತಿಯಾಗಿದ್ದಳು. ಈಕೆಯ ಮೊದಲ ಕವನ `ಮರ್ಯಾದಾದಲ್ಲಿ ಪ್ರಕಟವಾದಾಗ (1913) ಈಕೆಗೆ ಒಂಬತ್ತು ವರ್ಷ ವಯಸ್ಸಾಗಿತ್ತು. ದಿನಗಳೆದಂತೆ ರಾಷ್ಟ್ರೀಯ ಚೇತನವನ್ನು ಮೈದುಂಬಿಕೊಂಡ ಈಕೆಯ ರಚನೆಗಳು ತುಂಬ ಜನಪ್ರಿಯವಾಗಿತೊಡಗಿದವು. ಮಾಖಲ್‍ಲಾಲ್ ಚತುರ್ವೇದೀ, ಬಾಲಕೃಷ್ಣಶರ್ಮಾ ನವೀನ್, ಸುಂದರಲಾಲ್ ತ್ರಿಪಾಠೀ, ಪ್ರೇಮಚಂದ್ ಮೊದಲಾದ ರಾಷ್ಟ್ರೀಯವಾದೀ ಲೇಖಕರ ಪ್ರಭಾವಕ್ಕೆ ಒಳಗಾದ ಈಕೆ, ಅಜ್ಞಾತ ಪ್ರಿಯತಮನ ವಿರಹದಲ್ಲಿ ಕಣ್ಣೀರು ಹರಿಸುವುದಕ್ಕೆ ಬದಲಾಗಿ ನಾಡಿಗಾಗಿ ತಮ್ಮ ಸರ್ವಸ್ವವನ್ನೂ ಪಣವಾಗಿ ಒಡ್ಡಿದ ದೇಶಪ್ರೇಮಿಗಳ, ಮಹನೀಯರ ನೆನಪಿಗಾಗಿ ಕಣ್ಣೀರು ಸುರಿಸಿ ಆ ಬಗೆಯ ರಚನೆಗಳಲ್ಲೆ ಹೆಚ್ಚಾಗಿ ತೊಡಗಿದಳು. ಈ ದೃಷ್ಟಿಯಿಂದ ಈಕೆ ರಚಿಸಿದ ಕೆಲವು ದೇಶಭಕ್ತಗೀತೆಗಳು ಪರಿಣಾಮಕಾರಿಯೂ ಸ್ಫೂರ್ತಿದಾಯಕವೂ ಆಗಿವೆ. ಇಂಥ ರಚನೆಗಳಲ್ಲೊಂದಾದ ಝಾಂಸೀ ಕೀ ರಾನೀ ಎಂಬ ಕವನ ಈಕೆಯನ್ನು ಅತ್ಯಂತ ಜನಪ್ರಿಯವಾಗಿಸಿದ್ದು ಮಾತ್ರವಲ್ಲ. ಅಮರಳನ್ನಾಗಿ ಮಾಡಿತು. ಈ ಕವಿತೆಯ ಪಲ್ಲವಿ ನಾಡಿನ ಜನರ ನಾಲಗೆಯ ಮೇಲೆ ನಲಿಯಿತು. ಅಲ್ಲದೆ ನಾರೀ ಜೀವನದ ಸ್ವಾಭಾವಿಕ ಅಭಿವ್ಯಕ್ತಿಯನ್ನೂ ಕೌಟುಂಬಿಕ ಜೀವನದ ಅನನ್ಯ ಅನುಭೂತಿಯನ್ನೂ ಪ್ರಬಲ ಆಶಾವಾದಿತ್ವವನ್ನೂ ಈಕೆಯ ರಚನೆಗಳಲ್ಲಿ ಗುರುತಿಸಬಹುದಾಗಿದೆ. ಶೃಂಗಾರರಸದ ಪ್ರತೀಕವಾಗಿರುವ ಕೆಲವೊಂದು ಗೀತೆಗಳನ್ನೂ ಈಕೆ ರಚಿಸಿದ್ದಾಳೆ. ಆದರೆ ಇವುಗಳಲ್ಲಿ ಅತಿಬಾವುಕತೆಯ ಪ್ರೇಮಸ್ಪಂದನಕ್ಕೆ ಬದಲಾಗಿ ಸರಸತೆ, ಮಾಧುರ್ಯ ಮತ್ತು ಸಂಯಮ ಕಾಣದೊರೆಯುತ್ತವೆ. `ಠುಕಾರಾ ದೋ ಯಾ ಪ್ಯಾರ್ ಕರೋ, `ಪ್ರಿಯತಮ್‍ಸೇ-ಇವು ಈಕೆಯ ಇಂಥ ಪ್ರಸಿದ್ಧ ರಚನೆಗಳಲ್ಲಿ ಕೆಲವು. ಭಾವ ಮತ್ತು ಭಾಷೆಗಳ ಮಧುರ ಸಂಗಮಕ್ಕೂ ಈಕೆಯ ರಚನೆಗಳೂ ಹೆಸರಾಗಿವೆ.

	ಗೌರವ ಪರಂಪರೆಯೂ ಈಕೆಯನ್ನು ಹಿಂಬಾಲಿಸಿತು. ಪ್ರಸಿದ್ಧ ಕವಿಗಳ ಕವನಗಳಿಗೆ ಮೀಸಲಾಗಿದ್ದ ಕವಿತಾಕೌಮುದಿಯಂಥ ಸಂಕಲನದಲ್ಲೂ ಈಕೆಯ ಕವನಗಳಿಗೆ ಎಡೆ ದೊರೆಯಿತು. ಅಖಿಲಭಾರತ ಹಿಂದೀ ಸಾಹಿತ್ಯ ಸಮ್ಮೇಳನ ಈಕೆಯ ಅತ್ಯಂತ ಪ್ರಸಿದ್ಧ ಕವನ ಸಂಗ್ರಹವಾದ ಮುಕುಲ್ (1930) ಮತ್ತು ಸಣ್ಣ ಕಥೆಗಳ ಸಂಕಲನವಾದ ಬಿಖರೇ ಮೋತೀ (1932)ಗಳಿಗೆ ಎರಡು ಬಾರಿ ಸೆಕ್ಸಾರಿಯಾ ಬಹುಮಾನವನ್ನಿತ್ತು ಪುರಸ್ಕರಿಸಿತು. ಮುಂದೆ ಉನ್ಮಾದಿನೀ (1934) ಮತ್ತು ಸೀದೇ ಸಾದೇ ಚಿತ್ರ (1946) ಎಂಬ ಎರಡು ಕಥಾಸಂಕಲನಗಳು ಹೊರಬಂದುವು. 1932ರಿಂದ 1942ರವರೆಗಿನ ದಶಕದಲ್ಲಿ ಮಕ್ಕಳಿಗಾಗಿ ಈಕೆ ರಚಿಸಿದ್ದ ಅನೇಕ ಸುಂದರ ಶಿಶುಗೀತೆಗಳನ್ನು ಸಭಾ ಕೀ ಖೇಲ್ ಎಂಬ ಹೆಸರಿನಲ್ಲಿ ಪ್ರಕಟಿಸಲಾಗಿದೆ. ವಿವೇಚನಾತ್ಮಕ ಗಲ್ಪವಿಹಾರ ಮತ್ತು ತ್ರಿಧಾರಾ ಈಕೆಯ ಸಂಪಾದಕತ್ವದಲ್ಲಿ ಹೊರಬಂದ ಎರಡು ಪ್ರಾತಿನಿಧಿಕ ಸಂಕಲನಗಳು.

	ಈಕೆ ಮಧ್ಯಪ್ರದೇಶದ ವಿಧಾನಸಭೆಗೆ ಎರಡು ಬಾರಿ ಆಯ್ಕೆಯಾದರು. ಎರಡನೆಯ ಬಾರಿಯ ಆಯ್ಕೆಯಂತೂ ಅವಿರೋಧವಾಗಿತ್ತು. ತನ್ನ 44ನೆಯ ವಯಸ್ಸಿನಲ್ಲಿ ಈಕೆ ಕಾರು ಅಪಘಾತವೊಂದರಲ್ಲಿ ಅಸುನೀಗಿದಳು.
(ಪಿ.ಜಿ.ಡಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ